ಕಾವ್ಯ ದೋಷಗಳು

ಕಾವ್ಯದೋಷಗಳ ಸಮೀಕ್ಷೆ ಸಂಸ್ಕøತ ಅಲಂಕಾರ ಶಾಸ್ತ್ರದ ಪ್ರಧಾನವಿಷಯಗಳಲ್ಲಿ ಒಂದಾಗಿದೆ. ಭರತನಿಂದ ಭೋಜ, ವಿಶ್ವನಾಥರವರೆಗೆ ಪ್ರಾಯಃ ಪ್ರತಿಯೊಬ್ಬ ಲೇಖಕನೂ ಇದಕ್ಕಾಗಿ ತನ್ನ ಗ್ರಂಥದ ಒಂದೋ ಎರಡೋ ಅಧ್ಯಾಯಗಳನ್ನು ಮೀಸಲಾಗಿಟ್ಟಿರುವುದು ಕಂಡುಬರುತ್ತದೆ. ಸರ್ವಥಾಪದಮ ಪ್ಯೇಕಂ ನ ನಿಗಾದ್ಯಮವದ್ಯವತ್ (ಹೇಗೂ ದೋಷಯುಕ್ತವಾದ ಒಂದು ಪದವನ್ನೂ ಪ್ರಯೋಗಿಸಬಾರದು) ಎಂಬುದು ಅಲಂಕಾರಿಕರಲ್ಲಿ ಅತಿ ಪ್ರಾಚೀನನೆನಿಸಿರುವ ಭಾಮಹನ ಮತ. ಇದೇ ಅಂಶವನ್ನು ತದಲ್ಪಮಪಿನೋಪೇಕ್ಷ್ಯಂ ಕಾವ್ಯೇ ದುಷ್ಟಂ ಕಥಂಚನ (ಕಾವ್ಯದಲ್ಲಿ ಅತ್ಯಲ್ಪವಾದ ದೋಷವನ್ನೂ ಉಪೇಕ್ಷ ಮಾಡಬಾರದು) ಎಂದು ದಂಡಿಯೂ ಹೇಳಿದ್ದಾನೆ. ಕವಿಯಾಗದಿದ್ದಲ್ಲಿ ಅಧರ್ಮವಾಗಲೀ ವ್ಯಾಧಿ, ದಂಡನೆಗಳಾಗಲೀ ಸಲ್ಲುವುದಿಲ್ಲ, ಆದರೆ ಕುಕವಿತ್ವವೆಂಬುದು ಸಾವಿಗೇ ಸಮನಾದದ್ದು ಎಂದು ಹೇಳಿ ಭಾಮಹ ದೋಷಯುಕ್ತವಾದ ಕಾವ್ಯಗಳನ್ನು ರಚಿಸುವ ಕುಕವಿಗಳ ನಿಂದೆಯನ್ನು ಮಾಡಿದ್ದಾನೆ. ಇದಲ್ಲದೆ ಕಾವ್ಯವೆಂಬುದು ರಸಗರ್ಭಿತವಾಗಿದ್ದರೂ ಅಸುಂದರವಾಗಿದ್ದು ಸುಲಭವಾಗಿ ಅರ್ಥವಾಗದಿದ್ದರೆ ಎಳೆಯ ಚೀಲದ ಕಾಯಂತೆ ಹಿತಕರವಲ್ಲವೆಂದೂ ಹೇಳಿದ್ದಾನೆ. ಈಚಿನ ಕೆಲವು ವಿಮರ್ಶಕರೂ ಕಾವ್ಯದಲ್ಲಿ ದೋಷಗಳ ಅಭಾವಕ್ಕೆ ಇದೇ ರೀತಿಯ ಪ್ರಾಶಸ್ತ್ಯವನ್ನು ಕೊಟ್ಟು ಈ ಅಂಶವನ್ನು ಕಾವ್ಯಲಕ್ಷಣದ ಮೊದಲಲ್ಲೇ ಸೇರಿಸಿರುವುದೂ ಉಂಟು. ತದದೋಕ್ಷೌಶಬ್ದಾರ್ಥೌ-ಇತ್ಯಾದಿಯಾದ ಮಮ್ಮಟನ ಕಾವ್ಯಲಕ್ಷಣವನ್ನು ಇಲ್ಲಿ ಗಮನಿಸಬಹುದು. ಹೀಗೆ ಕಾವ್ಯದೋಷಗಳ ಸಮೀಕ್ಷೆಗೆ ಮೊದಲಿನಿಂದಲೂ ವಿಶೇಷವಾದ ಪ್ರಾಶಸ್ತ್ಯ ದೊರಕಿದೆ.

 ಮೊದಲಾಗಿ ನಾಟ್ಯಾಚಾರ್ಯ ಭರತ ತನ್ನ ನಾಟ್ಯಶಾಸ್ತ್ರದ ಹದಿನೇಳನೆಯ ಅಧ್ಯಾಯದಲ್ಲಿ ವಾಚಿಕಾಭಿನಯದ ಸ್ವರೂಪವನ್ನು ನಿರೂಪಿಸುತ್ತ 1 ಅಗೂಡ 2 ಅರ್ಥಂತರ 3 ಅರ್ಥಹೀನ. 4 ಭಿನ್ನಾರ್ಥ 5 ಏಕಾರ್ಥ 6 ಅಭಿಪ್ಲುತಾರ್ಥ 7 ನ್ಯಾಯಾದಪೇತ (ನ್ಯಾಯವಿರಹಿತವಾದದ್ದು) 8 ವಿಷಮ 9 ವಿಸಂಧಿ ಮತ್ತು 10 ಶಬ್ದಚ್ಯುತ ಎಂಬ ಹತ್ತು ಕಾವ್ಯದೋಷಗಳನ್ನು ಹೆಸರಿಸಿ ಏತೇದೋಸಷಾಸ್ತು ವಿಜ್ಞೇಯಾಃ ಸೂರಿಭಿರ್ನಾಟಕಾಶ್ರಯಾಃ (ನಾಟಕಕ್ಕೆ ಸಂಬಂಧಿಸಿದ ಈ ದೋಷಗಳು ಪಂಡಿತರಿಂದ ತಿಳಿಯಲ್ಪಡಬೇಕು. ಎಂದು ಹೇಳಿದ್ದಾನಲ್ಲದೆ ಈ ದೋಷಗಳ ಸ್ವರೂಪವನ್ನು ಸಂಗ್ರಹವಾಗಿ ತಿಳಿಸಿದ್ದಾನೆ. ಇವನಿಗೂ ಕ್ರಿ.ಶ. 5-6ನೆಯ ಶತಮಾನಗಳ ವೇಳೆಯಲ್ಲಿದ್ದ ಭಾಮಹನಿಗೂ ನಡುವಿನ ದೀರ್ಘಕಾಲದ ಅವಧಿಯಲ್ಲಿ ಅನೇಕ ವಿಷಯಗಳ ಮಥನವಾಗಿರಬೇಕೆಂದು ಊಹಿಸಬಹುದಾದರೂ ಅದಾವುದಕ್ಕೂ ಯಾವ ಗ್ರಂಥಾಧಾರವೂ ದೊರಕುವುದಿಲ್ಲ.

 ಭಾಮಹನ ಕಾವ್ಯಾಲಂಕಾರದಲ್ಲಿ ಕಾವ್ಯದೋಷಗಳ ವಿಮರ್ಶೆ ವಿಸ್ತಾರವಾಗಿ ನಡೆದಿದೆ. ಮೊದಲನೆಯ ಅಧ್ಯಾಯದಲ್ಲಿ 1 ನೇಯಾರ್ಥ 2 ಕ್ಲಿಷ್ಟ 3 ಅನ್ಯಾರ್ಥ 4 ಅವಾಚಕ 5 ಅಯುಕ್ತಿಮತ್ 6 ಗೂಢಶಬ್ದಾಭಿಧಾನ 7 ಶ್ರತಿದುಷ್ಟ 8 ಅರ್ಥದುಷ್ಟ. 9 ಕಲ್ಪನಾದುಷ್ಟ 10 ಶ್ರುತಿಕಷ್ಟ ಎಂಬ ಹತ್ತು ದೋಷಗಳನ್ನೂ ಪುನಃ ನಾಲ್ಕನೆಯ ಅಧ್ಯಾಯದಲ್ಲಿ 1 ಅಪಾರ್ಥ 2 ವ್ಯರ್ಥ 3 ಏಕಾರ್ಥ 4 ಸಸಂಶಯ 5 ಅಪಕ್ರಮ 6 ಶಬ್ದಹೀನ 7 ಯತಿಭ್ರಷ್ಟ 8 ಭಿನ್ನವೃತ್ತ 9 ವಿಸಂಧಿ ಮತ್ತು 10 ದೇಶಕಾಲ ಕಲಾ ಲೋಕನ್ಯಾಯಾಗಮ ವಿರೋಧಿ ಎಂಬ ಇನ್ನು ಹತ್ತು ದೋಷಗಳನ್ನೂ ಉದಾಹರಣೆಗಳೊಡನೆ ವಿವರಿಸಲಾಗಿದೆ. ಇದಲ್ಲದೆ ಎರಡನೆಯ ಅಧ್ಯಾಯದಲ್ಲಿ ಉಪಮಾಲಂಕಾರದ ವಿಷಯ ಪ್ರಸಕ್ತವಾದಾಗ ತನಗಿಂತ ಹಿಂದಿನ ಮೇಧಾವಿಯಿಂದ (ಮೇಧಾವಿರುದ್ರ) ಹೇಳಲ್ಪಟ್ಟ ಏಳು ಉಪಮಾದೋಷಗಳನ್ನೂ ಭಾಮಹ ಉಲ್ಲೇಖಿಸಿದ್ದಾನೆ. ಹೀನತಾ, ಅಸಂಭವ, ಲಿಂಗಭೇಧ, ವಚೋಭೇದ, ವಿಪರ್ಯಯ, ಉಪಮಾನಾಧಿಕತ್ವ ಮತ್ತು ಅಸಾದೃಶ್ಯ ಎಂಬ ಈ ಉಪಮಾದೋಷಗಳನ್ನು ವಿಮರ್ಶಿಸುವಾಗ ಯಾವ ಸಂದರ್ಭವಿಶೇಷಗಳಲ್ಲಿ ಈ ಕೆಲವು ದೋಷಗಳು ಸಂಭವಿಸುವುದಿಲ್ಲವೆಂಬುದನ್ನು ಮನಗಂಡು ಈ ಮಾತನ್ನು ಹೇಳಿದ್ದಾನೆ. ನ ಲಿಂಗ ವಚನೇ ಭಿನ್ನೇನ ಹೀನಾಧಿಕತಾಪಿ ವಾ| ಉಪಮಾದೂಷಣಾಯಾಲಂ ಯತ್ರೋದ್ವೇಗೋ ನ ಧೀಮತಾಂ. (ಕೇವಲ ಉಪಮಾನ ಉಪಮೇಯ ವಸ್ತುಗಳ ಲಿಂಗಭೇದಗಳಾಗಲೀ ಉಪಮಾನದ ನ್ಯೂನತ್ವ ಅಧಿಕತ್ವವಾಗಲೀ ಸಹೃದಯರಿಗೆ ಜುಗುಪ್ಸೆಯನ್ನುಂಟುಮಾಡದಿದ್ದರೆ, ದೋಷವಾಗಲಾರದು).

 ಹೀಗೆಯೇ ಉಪಮಾನ ಉಪಮೇಯ ವಸ್ತುಗಳಿಗೆ ಸಾಮ್ಯ ಎಪ್ಟಿರಬೇಕು ಹೇಗಿರಬೇಕು ಎಂಬ ಚರ್ಚೆಯೂ ನಡೆದಿದ್ದು ಅಂಥ ಸಾದೃಶ್ಯ ಸಹೃದಯರ ಅನುಭಕ್ಕೆ ಗೋಚರವಾಗುವಷ್ಟಿದ್ದರೆ ಸಾಕೆಂದೂ ಎಲ್ಲ ಅಂಶಗಳಲ್ಲಿಯೂ ಪೂರ್ಣವಾದ ಸಾದೃಶ್ಯವನ್ನು ಅಪೇಕ್ಷಿಸಬಾರದೆಂದೂ ತಿಳಿಸಿದ್ದಾನೆ (ಸರ್ವಂ ಸರ್ವೇಣಸಾರೂಪ್ಯಂ ನಾಸ್ತಿಭಾವಸ್ಯ ಕಸ್ಯಚಿತ್). ಇದಲ್ಲದೆ ಆಗಿನ ಕಾಲದಲ್ಲಿ ದಿಜ್ಞಾಗ, ವಸುಬಂಧು ಮೊದಲಾದವರು ತರ್ಕಶಾಸ್ತ್ರದಲ್ಲಿ ಸಾಧಿಸಿದ್ದ ಪ್ರಗತಿಯೂ ಭಾಮಹನ ಅಲಂಕಾರಿಕ ತತ್ತ್ವ ಮತ್ತು ಕಾವ್ಯದೋಷಸಮೀಕ್ಷೆಗಳ ಮೇಲೆ ಪ್ರಭಾವವನ್ನು ಬೀರದೆ ಇರಲಿಲ್ಲ. ಅಂತೆಯೇ ಕಲ್ಪನಾಸೌಧದಲ್ಲಿ ವಿಹರಿಸುವ ಕವಿವಾಣಿಯೂ ಕರ್ಕಶವಾದ ತಾರ್ಕಿಕನ್ಯಾಯಗಳ ಅಂಕುಶಕ್ಕೆ ಎಷ್ಟರಮಟ್ಟಗೆ ಅಧೀನವಾಗಿರಬೇಕಾಗುತ್ತದೆಂಬುದನ್ನೂ ಆದರೆ ಅದರ ಯಾವ ಇತಿಮಿತಿಗಳಿಗೂ ಇದು ಒಳಪಡುವುದಿಲ್ಲವೆಂಬುದನ್ನೂ ವಿವೇಚಿಸಲು ಈತ ಪ್ರಯತ್ನಿಸಿದ್ದಾನೆ. ಆರು ಬಗೆಯ ಪ್ರತಿಜ್ಞಾಹೀನ, ಮೂರು ಬಗೆಯ ಹೇತು ಹೀನ, ಮತ್ತು ದೃಷ್ಟಾಂತಹೀನ ಎಂಬ ತರ್ಕದೋಷಗಳನ್ನೂ ಉಲ್ಲೇಖಿಸಿ ಕಾವ್ಯದಲ್ಲಿ ಯಾವ ದೋಷಗಳನ್ನು ಪರಿಹರಿಸತಕ್ಕದ್ದೆಂಬುದನ್ನೂ ತಿಳಿದಿದ್ದಾನೆ. ಹೀಗೆ ಭಾಮಹನ ಸಮೀಕ್ಷೆ ಹಿಂದಿನ ಚರ್ಚೆಗಳ ಸಾರಾಂಶದಂತೆ ಗಮನಾರ್ಹವಾಗಿದೆ.

 ಅನಂತರ ದಂಡಿ (ಭಾಮಹ, ದಂಡಿ - ಇವರ ಪೌರ್ವಾಪರ್ಯದ ಬಗ್ಗೆ ವಿವಾದವಿದೆ.) ಭಾಮಹನಿಂದ ಹೇಳಲ್ಪಟ್ಟ ಅಪಾರ್ಥ, ವ್ಯರ್ಥ ಮೊದಲಾದ ಹತ್ತುದೋಷಗಳನ್ನು ಮಾತ್ರ ವಿವರಿಸಿ ಯಾವ ವಿಶೇಷ ಸಂದರ್ಭಗಳಲ್ಲಿ ಈ ಕೆಲವು ದೋಷಗಳು ಸಂಭವಿಸುವುದಿಲ್ಲವೆಂಬುದನ್ನು ತಿಳಿಸಿದ್ದಾನೆ.

 ವಾಮನ (ಕ್ರಿ.ಶ. 750-850) ತನ್ನ ಕಾವ್ಯಾಲಂಕಾರಸೂತ್ರವೃತ್ತಿಯಲ್ಲಿ ಈ ಬಗ್ಗೆ ಮತ್ತೊಂದು ಪ್ರಗತಿಪರ ಹೆಜ್ಜೆಯನ್ನಿಟ್ಟದ್ದಾನೆ. ಇವನ ಮತಾನುಸಾರ ಕಾವ್ಯದಲ್ಲಿ ಸೌಂದರ್ಯರೂಪವಾದ ಅಲಂಕಾರ ದೋಷಗಳ ಹಾನ (ತ್ಯಾಗ) ಮತ್ತು ಗುಣಗಳ ಆದಾನಗಳಿಂದ (ಅಂತರ್ಭಾವ) ಉಂಟಾಗುತ್ತವೆ. ದೋಷಗಳ ಲಕ್ಷಣವನ್ನು ಗುಣವಿಪರ್ಯಯಾತ್ಮಾನೋ ದೋಷಃ (ದೋಷಗಳು ಗುಣಗಳಿಗೆ ವಿರುದ್ಧವಾದವು) ಎಂಬುದಾಗಿ ಮೊಟ್ಟಮೊದಲಿಗೆ ನಿರೂಪಿಸಿರುವುದೂ ಗಮನಾರ್ಹವೆನಿಸಿದೆ. ವಾಮನ ಈ ಬಗೆಯ ದೋಷಗಳನ್ನು 1 ಪದದೋಷ 2 ಪದಾರ್ಥದೋಷ, 3 ವಾಕ್ಯದೋಷ ಮತ್ತು 4 ವಾಕ್ಯಾದೋಷ ಎಂದು ನಾಲ್ಕು ವಿಧವಾಗಿ ವಿಂಗಡಿಸಿ ಉದಾಹರಣೆಗಳ ಸಹಿತ ಪರಿಶೀಲಿಸಿದ್ದಾನೆ. ಈ ವಿಭಾಗಕ್ರಮವನ್ನೇ ಅರ್ವಾಚೀನರಾದ ಮಮ್ಮಟನೇ ಮೊದಲಾದವರು ಬಹುಮಟ್ಟಿಗೆ ಅಂಗೀಕರಿಸಿದ್ದಾರೆ. ವಾಮನನ ಮತಾನುಸಾರ ಅಸಾಧು, ಕಷ್ಟ, ಗ್ರಾಮ್ಯ, ಅಪಾರ್ಥ, ಅನರ್ಥಕ ಈ ಐದು ಪದದೋಷಗಳು. ಅನ್ಯಾರ್ಥ, ನೇಯಾರ್ಥ, ಗೂಢಾರ್ಥ, ಅಶ್ಲೀಲ, ಕ್ಲಿಷ್ಟ ಇವು ಪದಾರ್ಥದೋಷಗಳು. ಭಿನ್ನವೃತ್ತ, ಯತಿಭ್ರಷ್ಟ, ವಿಸಂಧಿ ಇವು ಮೂರು ವಾಕ್ಯದೋಷಗಳು. ವ್ಯರ್ಥ, ಏಕಾರ್ಥ, ಸಂದಿಗ್ಧ, ಅಯುಕ್ತ, ಅಪತ್ರಮ, ಲೋಕವಿದ್ಯಾವಿರುದ್ಧ ಇವು ಆರು ವಾಕ್ಯಾರ್ಥದೋಷಗಳು. ಭಾಮಹ ದಂಡಿ ಇವರು ಹೇಳಿರುವ ಕೆಲವು ದೋಷಗಳಿಗೆ ಇಲ್ಲಿ ಬೇರೆ ಹೆಸರನ್ನು ಕೊಡಲಾಗಿದೆ. ಏಕಾರ್ಥವೆಂಬ ದೋಷವನ್ನು ವಿವರಿಸುವಾಗ ವಾಮನ ಧನುಜ್ರ್ಯಾ, ಕರಿಕಲಭ, ಕರ್ಣಾವತಂಸ ಮೊದಲಾದ ಕೆಲವು ಪ್ರಯೋಗಗಳು ಪುನರುಕ್ತಗಳಂತೆ ಕಂಡರೂ ಸಾಧುವಾದುವೆಂದು ಸಮರ್ಥಿಸಿ ಮಹಾಕವಿ ಪ್ರಯೋಗ ರೂಪವಾದ ರೂಢಿಗೆ ಗೌರವ ಕೊಟ್ಟಿದ್ದಾನೆ. ಹೀಗೆಯೇ ಇತರ ಕೆಲವು ದೋಷಗಳ ವಿಚಾರದಲ್ಲಿಯೂ ಹಿಂದಿನ ವಿಮರ್ಶಕರಂತೆ ವ್ಯತಿರೇಕದ ನಿದರ್ಶನಗಳನ್ನು ಪ್ರದರ್ಶಿಸಿ ಕೂಲಂಕಷವಾದ ವಿಚಾರವನ್ನು ಮುಂದುವರಿಸಿದ್ದಾನೆ. ಎಲ್ಲಕಿಂತ ಮಿಗಿಲಾದ ಈತ ದೋಷಗಳನ್ನು ಸ್ಥೂಲ ಮತ್ತು ಸೂಕ್ಷ್ಮ ಎಂದೂ ವಿಂಗಡಿಸಿ ಸ್ಥೂಲ ದೋಷಗಳ ಕಾವ್ಯದ ಸೌಂದರ್ಯಕ್ಕೇ ಹಾನಿಯನ್ನುಂಟು ಮಾಡತ್ತವೆಯೆಂದೂ ಸೂಕ್ಷ್ಮದೋಷಗಳು ಅದಕ್ಕೆ ಧಕ್ಕೆ ತರದಂತೆ ಇರುತ್ತವೆಂದೂ ಹೇಳಿ ಮುಂದಿನ ವಿಮರ್ಶಕರು ಮಾಡಿರುವ ನಿತ್ಯ ಮತ್ತು ಅನಿತ್ಯ ದೋಷಗಳ ವಿಭಾಗ ವ್ಯವಸ್ಥೆಗೆ ಪೀಠಿಕೆಯನ್ನೂ ಹಾಕಿಕೊಟ್ಟಿದ್ದಾನೆ. ಕಡೆಯದಾಗಿ ಉಪಮಾಲಂಕಾರಕ್ಕೆ ಸಂಬಂಧಿಸಿದಂತೆ ಹಿಂದೆ ಭಾಮಹ ಹೇಳಿದ್ದ ಏಳು ದೋಷಗಳಲ್ಲಿ ವಿಪರ್ಯಯವನ್ನು ಹೀನತ್ವ ಮತ್ತು ಅಧಿಕತ್ವಗಳಲ್ಲಿ ಸೇರಿಸಿ ಆರು ದೋಷಗಳನ್ನು ಮಾತ್ರ ಅಂಗೀಕರಿಸುತ್ತಾನೆ.

ಅನಂತರ ರುದ್ರಟ (ಕ್ರಿ.ಶ. 825-875) ತನ್ನ ಕಾವ್ಯಾಲಂಕಾರದಲ್ಲಿ ನಾಲ್ಕು ವಿಧವಾದ ಉಪಮಾದೋಷ ಆರು ವಿಧವಾದ ಪದದೋಷ ಮೂರು ವಾಕ್ಯದೋಷ ಒಂಬತ್ತು ಅರ್ಥಗತದೋಷ ಮತ್ತು ಗುಣಗಳ ಅಭಾವದಿಂದ ಉಂಟಾಗುವ ಆರು ದೋಷಗಳು ಹೀಗೆ ಒಟ್ಟು ಇಪ್ಪತ್ತೆಂಟು ಬಗೆಯ ಕಾವ್ಯದೋಷಗಳನ್ನು ಉದಾಹರಿಸಿದ್ದಾನೆ. ಇವುಗಳಲ್ಲಿ ಅಸಮರ್ಥದೇಶ್ಯ, ಸಂಕೀರ್ಣ, ಗರ್ಭಿತ, ಗತಾರ್ಥ ಮೊದಲಾದ ಹದಿನೈದು ದೋಷಗಳನ್ನು ಹಿಂದಿನವರು ಹೇಳದಿದ್ದರೂ ಈತನೇ ಪ್ರಥಮತಃ ಉಲ್ಲೇಖಿಸಿದ್ದಾನೆ. ಈ ದೋಷಗಳಲ್ಲಿ ಎರಡು ರಸ ಪ್ರತೀತಿಗೂ ಕೆಲವು ಇಡೀ ಪ್ರಬಂಧಕ್ಕೂ ಅನ್ವಯಿಸುವಂತಿವೆ.

ಕ್ರಿ.ಶ. 855 ರಿಂದ 883ರ ಅವಧಿಯಲ್ಲಿ ಧ್ವನಿ ಸಿದ್ಧಾಂತವನ್ನು ಪ್ರತಿಪಾದಿಸಿದ ಆನಂದನರ್ಧನನ ದೋಷಸಮೀಕ್ಷೆ ಇನ್ನೂ ಪ್ರಗತಿಪರವಾಗಿದೆ. ಕಾವ್ಯದ ಆತ್ಮವೆನಿಸಿದ ರಸ ಅಥವಾ ರಸಧ್ವನಿಯ ದೃಷ್ಟಿಯಿಂದಲೇ ದೋಷತ್ವವನ್ನು ನಿರ್ಣಯಿಸಬೇಕೆಂಬುದು ಅವನ ಮುಖ್ಯವಾದ ಅಭಿಪ್ರಾಯ. ಹಿಂದಿನವರು ಹೇಳುತ್ತ ಬಂದಿರುವ ಶ್ರುತಿದುಷ್ಟವೇ ಮೊದಲಾದ ಕೆಲವು ದೋಷಗಳು ಎಲ್ಲ ಸಂದರ್ಭಗಳಲ್ಲಿಯೂ ದೋಷಗಳಾಗಿ ಪರಿಣಮಿಸುವುದಿಲ್ಲವಾದ ಕಾರಣ ಅಂಥವನ್ನು ಅನಿತ್ಯ ದೋಷಗಳೆಂದು ಪರಿಗಣಿಸಬೇಕು. ಇಂಥ ಕೆಲವು ಅನಿತ್ಯದೋಷಗಳು ಶೃಂಗಾರರಸದ ಪ್ರತೀತಿಗೆ ಬಾಧಕವಾಗಬಹುದೇ ಹೊರತು ವೀರ ರೌದ್ರಾದಿ ರಸಗಳ ವಿಷಯದಲ್ಲಿ ದೋಷವಾಗುವುದಿಲ್ಲವೆಂಬ ಅಂಶವನ್ನು ವ್ಯಕ್ತಪಡಿಸಿ, ಆನಂದವರ್ಧನ ತನ್ನ ಹೊಸ ಸೂತ್ರವನ್ನು ಸಮರ್ಥಿಸಿದ್ದಾನೆ. ಹೀಗೆಯೆ ಯಮಕ, ಅನುಪ್ರಾಸ ಮೊದಲಾದ ಕೆಲವು ಅಲಂಕಾರಗಳೂ ದೋಷವಾಗಿ ಪರಿಣಮಿಸಲು ಸಾಧ್ಯವೆಂದು ಆತನ ಮತ.

"ಅನೌಚಿತ್ಯಾದೃತೇ ನಾನ್ಯದ್ರಸಭಂಗಸ್ಯ ಕಾರಣಂ |

ಪ್ರಸಿದ್ಧೌಚಿತ್ಯಬಂಧಸ್ತು ರಸಸ್ಯೋಪನಿಷತ್ಪರಾ |

ಎಂಬ ಈ ಸೂತ್ರಕ್ಕನುಸಾರವಾಗಿ ರಸಪ್ರತೀತಿಗೆ ಭಂಗ ತರುವ ಎಲ್ಲ ವಿಧವಾದ ಅನೌಚಿತ್ಯ ಪ್ರಸಂಗಗಳೂ ದೋಷಗಳೆನಿಸಿಕೊಳ್ಳುತ್ತವೆ.

ಯತ್ರ ವಿನೇಯಾನಾಂ ಪ್ರತೀತಿಖಂಡನಾನ ಜಾಯತೇ

ತಾದೃಗ್ವರ್ಣನೀಯಂ,

ವಿರೋಧಿರಸಸಂಬಂಧಿ ವಿಭಾವಾದಿಪರಿಗ್ರಹಃ |

ವಿಸ್ತರೇಣಾನ್ವಿತಸ್ಯಾಪಿ ವಸ್ತುನೋನ್ಯಸ್ಯ ವರ್ಣನಮ್ |

ಪರಿಪೋಷಂ ಗತಸ್ಯಾಪಿ ಪೌನಃ ಪುನ್ಯೇನದೀಪನಂ |

ರಸಸ್ಯ ಸ್ಯಾದ್ವಿರೋಧಾಯ ವೃತ್ತ್ಯನೌಚಿತ್ಯಮೇವ ಚ |

ಎಂಬ ದಿಗ್ದರ್ಶನಗಳು ಆನಂದವರ್ಧನನ ಔಚಿತ್ಯಜ್ಞಾನಕ್ಕೂ ರಸಾನುಭವ ಸಂಸ್ಕಾರಕ್ಕೂ ಸಾಕ್ಷಿಯೆನಿಸಿದೆ. ಈ ಅಭಿಪ್ರಾಯಕ್ಕನುಗುಣವಾಗಿ ಉದ್ದಿಷ್ಟವಾದ ಪ್ರಧಾನ ರಸಕ್ಕೆ ವಿರೋಧಿಯಾದ ಯಾವೊಂದು ಬೇರೆ ರಸದ ವಿಭಾವಾದಿಗಳ ಪ್ರತಿಪಾದನೆ. ಸಾಕಷ್ಟು ವಿಸ್ತಾರ ಹೊಂದಿದ ವಸ್ತುವಿನ ಮಧ್ಯೆ ಬೇರೆ ಪ್ರಸಂಗದ ಬೆಳೆವಣಿಗೆ, ಮತ್ತು ಉಚಿತವಾದ ಪರಿಪೋಷವನ್ನು ಹೊಂದಿದ ರಸವನ್ನು ಮತ್ತೆ ಮತ್ತೆ ಉದ್ದೀಪನಗೊಳಿಸುವಿಕೆ ಮೊದಲಾದುವೆಲ್ಲ ಅನೌಚಿತ್ಯರೂಪವಾದ ದೋಷಗಳಾಗುತ್ತವೆಂದು ತಾತ್ಪರ್ಯ.

ಈಚಿನ ಧ್ವನಿಮತಾನುಯಾಯಿಗಳ ಪರಿಷ್ಕಾರದ ಪ್ರಕಾರ ದೋಷಗಳು ಕಾವ್ಯದ ಮಟ್ಟವನ್ನು ಕಡಿಮೆ ಮಾಡುತ್ತವೆ (ದೋಷಾಸ್ತಸ್ಯಾಪಕರ್ಷಕಾಃ). ಕಾವ್ಯವನ್ನು ಮನುಷ್ಯನಿಗೆ ಹೋಲಿಸಿದರೆ ರಸ ಆತ್ಮದಂತೆ ; ಶಬ್ದ ಮತ್ತು ಅರ್ಥಗಳು ಶರೀರದಂತೆ ; ಗುಣಗಳು ಶೌರ್ಯ, ಔದಾರ್ಯ, ಧೈರ್ಯಗಳಂತೆ ; ದೋಷಗಳು ಕುಂಟು, ಕುರುಡುಗಳಂತೆ; ಅಲಂಕಾರಗಳು ಬಳೆ, ಹಾರ, ಕುಂಡಲಾದಿ ಭೂಷಣಗಳಂತೆ-ಎಂದು ಒಂದು ರೀತೆಯ ಸ್ಥೂಲವಾದ ಮೌಲ್ಯಮಾಪನ ನಡೆದು ಬಂದಿದೆ. ಈ ತತ್ತ್ವವನ್ನನುಸರಿಸಿ ಕ್ರಿ.ಶ. 1050-1125ರಲ್ಲದ್ದ ಮಮ್ಮಟ ಕಾವ್ಯ ದೋಷಗಳ ವಿವೇಚನೆಯಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾನೆ. ಆದರೆ ಈತ ತನಗೆ ಹಿಂದೆ ಈ ವಿಷಯವನ್ನು ವಿಮರ್ಶಿಸಿದ್ದ ಆನಂದವರ್ಧನ, ಅಭಿನವಗುಪ್ತರಿಗೆ ಮಾತ್ರವಲ್ಲದೆ ಅನೇಕ ಅಂಶಗಳಲ್ಲಿ ವ್ಯಕ್ತಿವಿವೇಕಕಾರನಾದ ಮಹಿಮಭಟ್ಟನಿಗೂ (ಕ್ರಿ.ಶ. 1020-1060) ಋಣಿಯಾಗಿದ್ದಾನೆ. ಮಹಿಮಾಭಟ್ಟ ಧ್ವನಿವಾದಿಗಳ ಸಿದ್ಧಾಂತವನ್ನು ಖಂಡಿಸಿ ಧ್ವನಿಯೆಂಬುದೆಲ್ಲ ಕಾವ್ಯಾನುಮಿತಿಯ ಪ್ರಕಾರಗಳಲ್ಲಿ ಅಂತರ್ಭವಿಸುತ್ತದೆಯೆಂದು ತೋರಿಸಿಕೊಡಲು ಹೊರಟವನಾದರು ದೋಷಗಳ ವಿವೇಚನೆಯಲ್ಲಿ ಯುಕ್ತಿಯುಕ್ತವೂ ಸಹೃದಯ ಗ್ರಾಹ್ಯವೂ ಆದ ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾನೆ. ವಿವಕ್ಷಿತ ರಸಾದಿಪ್ರತೀತಿವಿಘ್ನವಿಧಾಯಿತ್ವಂ ನಾಮ ಸಾಮಾನ್ಯಲಕ್ಷಣಂ ಎಂದು ಮಹಿಮಭಟ್ಟ ಕಾವ್ಯದೋಷದ ಸಾಮಾನ್ಯಲಕ್ಷಣವನ್ನು ನಿರೂಪಿಸಿ, 1 ವಿಧೇಯಾವಿಮರ್ಶ 2 ಪ್ರಕ್ರಮ ಭೇದ 3 ಕ್ರಮಭೇದ 4 ಪುನರುಕ್ತ ಮತ್ತು 5 ವಾಚ್ಯಾವಚನ ಎಂಬ ಐದು ದೋಷಗಳನ್ನು ಮಾತ್ರ ಎತ್ತಿ ಹೇಳಿದ್ದರೂ ಅವನ ಉದಾಹರಣೆಗಳ ವಿಮರ್ಶೆ ವಿಸ್ತಾರವಾಗಿರುವುದಲ್ಲದೆ ಎಲ್ಲ ಮುಖ್ಯದೋಷಗಳೂ ಇಷ್ಟರಲ್ಲೇ ಒಳಗೊಂಡಿರುವಂತಿದೆ.

ತನಗೆ ಹಿಂದಿನ ವಿಮರ್ಶಕರ ಭಾವನೆ ಅಭಿಪ್ರಾಯಗಳನ್ನೆಲ್ಲ ಕ್ರೋಡೀಕರಿಸಿ ಸುವ್ಯವಸ್ಥಿತವಾದ ಸಾಹಿತ್ಯಶಾಸ್ತ್ರವನ್ನು ನಿರೂಪಿಸಲು ಹೊರಟ ಮಮ್ಮಟ ತನ್ನ ಕಾವ್ಯ ಪ್ರಕಾಶವೆಂಬ ಉದ್ಗ್ರಂಥದಲ್ಲಿ ದೋಷದ ಸಾಮಾನ್ಯ ಲಕ್ಷಣವನ್ನು ಮುಖ್ಯಾರ್ಥಹತಿಃ ಎಂಬುದಾಗಿ ನಿರೂಪಿಸಿದ್ದಾನೆ. ಈ ಲಕ್ಷಣವೇ ವಿಸ್ತಾರವಾದ ಟೀಕೆ ಟಿಪ್ಪಣಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಮಮ್ಮಟನ ವಿಭಾಗವ್ಯವಸ್ಥೆಯ ಪ್ರಕಾರ 1 ಶ್ರುತಿಕಟ್ಟು 2 ಚ್ಯುತಸಂಸ್ಕøತಿ 3 ಅಪ್ರಯುಕ್ತ 4 ಅಸಮರ್ಥ 5 ನಿಹತಾರ್ಥ 6 ಅನುಚಿತಾರ್ಥ 7 ನಿರರ್ಥಕ 8 ಅವಾಚಕ 9 (ಮೂರು ಬಗೆಯ) ಅಶ್ಲೀಲ 10 ಸಂದಿಗ್ಧ 11 ಅಪ್ರತೀಕ 12 ಗ್ರಾಮ್ಯ 13 ನೇಯಾರ್ಥ 14 ಕ್ಲಿಷ್ಟ 15 ಅವಿಮೃಷ್ಟವಿಧೇಯಾಂಶ 16 ವಿರುದ್ಧಮತಿಕೃತ್-ಈ ಹದಿನಾರು ಪದದೋಷಗಳು. ಇವುಗಳಲ್ಲಿ ಕೊನೆಯ ಮೂರು ಸಮಾನ ಪದಗಳಿಗೆ ಮಾತ್ರ ಸಂಬಂಧಿಸಿದುವು. ಚ್ಯುತಸಂಸ್ಕøತಿ, ಅಸಮರ್ಥ, ನಿರರ್ಥಕ ಈ ಮೂರನ್ನು ಬಿಟ್ಟು ಉಳಿದ ದೋಷಗಳು ವಾಕ್ಯಗಳಿಗೂ ಅನ್ವಯಿಸುವುದರಿಂದ ವಾಕ್ಯದೋಷಗಳೂ ಆಗಲು ಸಾಧ್ಯ. ಕೆಲವು ದೋಷಗಳು ಪದಾಂಶಗಳಲ್ಲಿಯೂ ಕಂಡು ಬರುತ್ತವೆ. ವಾಕ್ಯಗಳಲ್ಲಿ ಮಾತ್ರ ಉಂಟಾಗುವ ಇಪ್ಪತ್ತೊಂದು ದೋಷಗಳು ಈ ರೀತಿ ಇವೆ :

1 ಪ್ರತಿಕೂಲವರ್ಣ 2 ಉಪಹತವಿಸರ್ಗ 3 ಲುಪ್ತವಿಸರ್ಗ 4 ವಿಸಂಧಿ 5 ಹತವೃತ್ತ 6 ನ್ಯೂನಪದ 7 ಅಧಿಕಪದ 8 ಕಥಿತಪದ 9 ಪತತ್ಪ್ರಕರ್ಷ 10 ಸಮಾಪ್ತಪುನರಾತ್ತ 11 ಅರ್ಧಾಂತರೈಕವಾಚಕ 12 ಅಭವನ್ಮತಯೋಗ 13 ಅನಭಿಹಿತವಾಚ್ಯ 14 ಅಪದಸ್ಥಪದ 15 ಅಪದಸ್ಥಸಮಾಸ 16 ಸಂಕೀರ್ಣ 17 ಗರ್ಭಿತ 18 ಪ್ರಸಿದ್ಧಿಹತ 19 ಭಗ್ನಪ್ರಕ್ರಮ 20 ಅಕ್ರಮ 21 ಅಮತಪರಾರ್ಥ.

 ಇವಲ್ಲದೆ ಮಮ್ಮಟ ಉದಾಹರಿಸಿರುವ ಇಪ್ಪತ್ತಮೂರು ಅರ್ಥದೋಷಗಳು ಈ ರೀತಿ ಇವೆ : 1 ಅಪುಷ್ಟ 2 ಕಷ್ಟ 3 ವ್ಯಾಹತ 4 ಪುನರುಕ್ತ 5 ದುಷ್ಕ್ರಮ 6 ಗ್ರಾಮ್ಯ 7 ಸಂದಿಗ್ಧ 8 ನಿರ್ಹೇತು 9 ಪ್ರಸಿದ್ಧಿ ವಿರುದ್ಧ 10 ವಿದ್ಯಾವಿರುದ್ಧ 11 ಅನವೀಕೃತ 12 ಸನಿಯಮಪರಿವೃತ್ತ 13 ಅನಿಯಮಪರಿವೃತ್ತ 14 ವಿಶೇಷಣಪರಿವೃತ್ತ 15 ಅವಿಶೇಷಣಪರಿವೃತ್ತ 16 ಸಾಕಾಂಕ್ಷ 17 ಅಪದಯುಕ್ತ 18 ಸಹಚರಭಿನ್ನ 19 ಪ್ರಕಾಶಿತವಿರುದ್ಧ 20 ವಿಧ್ಯಯುಕ್ತ 21 ಅನುವಾದ ಯುಕ್ತ 22 ತ್ಯಕ್ತಪುನಸ್ಸ್ವೀಕೃತ 23 ಅಶ್ಲೀಲ.

ಕಡೆಯದಾಗಿ ಮಮ್ಮಟ ಹದಿಮೂರು ರಸದೋಷಗಳನ್ನೂ ಅನುಪ್ರಾಸ, ಯಮಕ, ಉಪಮಾ ಮೊದಲಾದ ಅಲಂಕಾರಗಳಿಗೆ ಸಂಬಂಧಿಸಿದ ಅನೇಕ ದೋಷಗಳನ್ನೂ ಉದಾಹರಣೆಗಳ ಸಹಿತ ವಿವರಿಸಿದ್ದಾನೆ. ಇಷ್ಟು ವಿಸ್ತಾರವೂ ಸೂಕ್ಷ್ಮವೂ ಆದ ಇವನ ದೋಷೋದ್ಭಾವನೆಯ ಅಂಕುಶಕ್ಕೆ ಮಹಾಕವಿಗಳೂ ಸಿಕ್ಕಿಬಿದ್ದಿದ್ದಾರೆ. ಇವನ ಸಂಯುಕ್ತಿಕ ಸಮರ್ಥನೆಯ ಬೆಳಕಿನಲ್ಲಿ ವೈಯಕ್ತಿಕ ದುರಾಗ್ರಹದ ಸೋಂಕಿಗೂ ಅವಕಾಶವಿಲ್ಲದಂತಾಗಿದೆ. ಈ ಒರೆಗಲ್ಲಿನ ಪರೀಕ್ಷೆ ಶುದ್ಧವಾದ ಚಿನ್ನವನ್ನೇ ಪತ್ತೆಮಾಡುತ್ತದೆಯೆಂಬುದೂ ನಿರ್ವಿವಾದ. ಆದರೆ ಇಂಥ ಚಿನ್ನ ಎಷ್ಟು ಸಿಕ್ಕೀತೋ ಹೇಳಲಸಾಧ್ಯ. ಇಂಥ ಉಜ್ಜ್ವಲವೂ ತೀಕ್ಷ್ಣವೂ ಆದ ಮಮ್ಮಟನ ದೋಷದೃಷ್ಟಿಗೆ ಔದಾರ್ಯವಿಲ್ಲದೆ ಇಲ್ಲ. ದೋಷಗಳಲ್ಲಿ ಕೆಲವು ನಿತ್ಯ ಕೆಲವು ಅನಿತ್ಯವೆಂಬುದನ್ನೂ ಕೆಲವು ಅಂತರಂಗದ ದೋಷಗಳಾದರೆ ಮತ್ತೆ ಕೆಲವು ಬಾಹ್ಯದೋಷಗಳೆಂಬ ವಿಚಾರವನ್ನೂ ಆತ ಅಂಗೀಕರಿಸಿದ್ದಾನೆ. ದೋಷವಾಗಬಹುದಾದ ಕೆಲವು ಅಂಶಗಳು ಯಾವ ವಿಶೇಷ ಸಂದರ್ಭಗಳಲ್ಲಿ ದೋಷಗಳಾಗುವುದಿಲ್ಲವೆಂಬುದನ್ನೂ ರಸದೋಷಗಳಿಗೆ ಗುರಿಯಾದ ಕೆಲವು ಪ್ರಸಂಗಗಳನ್ನೂ ಉದಾಹರಣೆಗಳ ಸಹಿತ ವ್ಯಕ್ತಗೊಳಿಸಿದ್ದಾನೆ. ಒಟ್ಟಿನಲ್ಲಿ ದೋಷಪ್ರಕರಣದ ಯಾವುದೇ ಅಂಶದಲ್ಲಿಯೂ ಮಮ್ಮಟನ ಅಭಿಪ್ರಾಯವೇ ಕೊನೆಯ ಮಾತೆನ್ನಿಸುವಷ್ಟು ಪ್ರಾಧಾನ್ಯಗಳಿಸಿದೆ.

ಕ್ರಿ.ಶ.1010-1055ರ ಅವಧಿಯಲ್ಲಿದ್ದ ಭೋಜ ತನ್ನ ಶೃಂಗಾರಪ್ರಕಾಶ ಮತ್ತು ಸರಸ್ವತೀಕಂಠಾಭರಣ ಎಂಬ ಗ್ರಂಥಗಳಲ್ಲಿ ಹದಿನಾರು ಬಗೆಯ ಪದದೋಷ, ಅದೇ ಸಂಖ್ಯೆಯ ವಾಕ್ಯದೋಷ ಮತ್ತು ವಾಕ್ಯಾರ್ಥದೋಷಗಳನ್ನು ವಿಸ್ತಾರವಾಗಿ ಉದಾಹರಣೆಗಳ ಸಹಿತ ನಿರೂಪಿಸಿದ್ದಾನೆ.

ಕಡೆಯದಾಗಿ ಔಚಿತ್ಯವೇ ಕಾವ್ಯದ ಜೀವವೆಂಬ ನೂತನ ಸಿದ್ಧಾಂತವನ್ನು ಮಂಡಿಸಿದ ಕ್ಷೇಮೇಂದ್ರ (ಕ್ರಿ.ಶ. ಹನ್ನೊಂದನೆಯ ಶತಮಾನ) ದೋಷಗಳ ವಿಚಾರವಾಗಿ ಮನಗಂಡಿರುವ ಅಂಶಗಳು ಗಮನಾರ್ಹವೆನಿಸಿದರೂ ದಂಡಿ, ಭಾಮಹ ಮೊದಲಾದ ಪ್ರಾಚೀನರು ಅವನ್ನು ಅರಿತಿರಲಿಲ್ಲವೆಂದು ಹೇಳಲು ಸಾಧ್ಯವಿಲ್ಲ.

 ಸನ್ನಿವೇಶವಿಶೇಷಾತ್ತು ದುರುಕ್ತಮಪಿ ಶೋಭತೇ

 ಕಾಂತಾ ವಿಲೋಚನನ್ಯಸ್ತಂ ಮಲೀಮಸಮಿವಾಂಜನಮ್     

 (ಎಸ್.ವಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ